ನೀಲಧ್ವಜ -
ಮಾಹಿಷ್ಮತೀ ಪುರವನ್ನು ಆಳುತ್ತಿದ್ದ ಒಬ್ಬ ರಾಜ. ಮಹಾಭಾರತದಲ್ಲಿ ಈತನ ಹೆಸರು ನೀಲ ಎಂದಿದೆ. ಈತನ ಮಗಳು ಸ್ವಾಹೆಯನ್ನು ಅಗ್ನಿ ಮದುವೆಯಾದ. ಪಾಂಡವರ ಅಶ್ವಮೇಧಯಾಗದ ಕುದುರೆ ಮಾಹಿಷ್ಮತೀನಗರದ ಬಳಿ ಬಂದಾಗ ಈತನ ಮಗ ಪ್ರವೀರ ಬಂಧಿಸಿದ. ಅನುಸಾಲ್ವನೊಡನೆ ನಡೆದ ಯುದ್ಧದಲ್ಲಿ ಪ್ರವೀರ ಸೋತಾಗ ನೀಲಧ್ವಜ ಬಂದು ಅನುಸಾಲ್ವನನ್ನು ಸೋಲಿಸಿದ್ದಲ್ಲದೆ ಅಗ್ನಿಯ ನೆರವಿನಿಂದ ಅರ್ಜುನನನ್ನು ಹಿಮ್ಮೆಟ್ಟಿಸಿದ. ಅರ್ಜುನ ಅಗ್ನಿಯನ್ನು ಪ್ರಾರ್ಥಿಸಿ ಒಲಿಸಿಕೊಂಡಾಗ ಗೆದ್ದೆನೆಂದು ಬೀಗುತ್ತಿದ್ದ ತನ್ನ ಮಾವನಿಗೆ ಅಗ್ನಿ ಶ್ರೀಕೃಷ್ಣನ ಮಹಿಮೆಯನ್ನು ತಿಳಿಸಿ ಯಜ್ಞದ ಕುದುರೆಯನ್ನು ಹಿಂದಿರುಗಿಸಲು ಹೇಳಿದ. ನೀಲಧ್ವಜ ಇದಕ್ಕೆ ಒಪ್ಪಿಕೊಂಡರೂ ಪತ್ನಿಯಾದ ಜ್ವಾಲೆಯಿಂದ ಪ್ರೇರಿತನಾಗಿ ಮತ್ತೆ ಯುದ್ಧಕ್ಕೆ ಹೊರಟ. ಆಗ ಅರ್ಜುನ ನಾರಾಯಣಾಸ್ತ್ರದಿಂದ ಈತನ ಕೆಚ್ಚನ್ನು ಮುರಿದ. ಬಳಿಕ ಅಗ್ನಿ ನೀಲಧ್ವಜನಿಗೂ ಅರ್ಜುನನಿಗೂ ಸ್ನೇಹವನ್ನುಂಟು ಮಾಡಿಸಿ ಪಾಂಡವರ ಅಶ್ವಮೇಧಯಾಗಕ್ಕೆ ನೆರವಾಗುವಂತೆ ಮಾಡಿದ. ಈ ವೃತ್ತಾಂತ ಸಂಸ್ಕøತ ಹಾಗೂ ಕನ್ನಡ ಜೈಮಿನಿ ಭಾರತಗಳಲ್ಲಿ ಬಂದಿದೆ.           (ಕೆ.ಆರ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ